ಅಬ್ರಡೊವಿಚ್, ದ ಸಿತ್ಯ		 
	ಸರ್ಬಿಯದ ಸಾಹಿತಿ ಮತ್ತು ಶಿಕ್ಷಣತಜ್ಞ (1742-1811). ಬಡಸಂಸಾರದಲ್ಲಿ ಹುಟ್ಟಿ, ತಬ್ಬಲಿಯಾಗಿ, ಸಂನ್ಯಾಸಾಶ್ರಮವನ್ನು ಸ್ವೀಕರಿಸಿ, ಅನಂತರ ಅದನ್ನು ತ್ಯಜಿಸಿದ. ಯೂರೋಪಿನ ಹಲವು ದೇಶಗಳಲ್ಲಿ ಪ್ರವಾಸ ಮಾಡಿದ. ಸರ್ಬಿಯದಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದವರಲ್ಲಿ ಮೊಟ್ಟ ಮೊದಲನೆಯವ. ಸರ್ಬಿಯದ ಶಿಕ್ಷಣಮಂತ್ರಿಯಾಗಿ ಮೊಟ್ಟಮೊದಲು ಪ್ರೌಢಶಾಲೆಯನ್ನು ಸ್ಥಾಪಿಸಿದ.

	ಈತ ಹಲವು ಭಾಷಾಂತರಗಳನ್ನು ಮಾಡಿದ್ದಾನೆ. ಇವುಗಳಲ್ಲಿ ಈಸೋಪನ ನೀತಿಕಥೆಗಳು (1788) ಮುಖ್ಯವಾದುವು. ಇವನ ಭಾಷಾಂತರಗಳ ಮುಖ್ಯ ಉದ್ದೇಶ ಸರ್ಬಿಯರಿಗೆ ವಿದ್ಯಾಭ್ಯಾಸದ ಮಹತ್ತ್ವವನ್ನೂ ಐರೋಪ್ಯ ಸಂಸ್ಕøತಿಯ ಮೂಲಕ ತಮ್ಮ ಪ್ರಾಚೀನ ಸಂಸ್ಕøತಿಯನ್ನು ಅರಿಯುವ ಮಹತ್ತ್ವವನ್ನೂ ತಿಳಿಸುವುದು. ಸ್ವತಂತ್ರ ಕೃತಿಗಳಲ್ಲಿ ಮುಖ್ಯವಾದುವು; ಜೀವನ ಮತ್ತು ಸಾಹಸಗಳು (1783). ಇದು ಇವನ ಆತ್ಮವೃತ್ತ. ಸದುಪದೇಶ ಎಂಬುದು ಇನ್ನೊಂದು ಕೃತಿ. ಈತ ನೀತಿಶಾಸ್ತ್ರವನ್ನೂ ಬರೆದಿದ್ದಾನೆ. ನೇರವೂ ಸ್ಫುಟವೂ ಜನಸಾಮಾನ್ಯಭಾಷೆಗೆ ಸಮೀಪವೂ ಆದ ಇವನ ಶೈಲಿಯಲ್ಲಿ ಹಳೆ ಸ್ಲವೋನಿಕ್ ಶಬ್ದಗಳ ಬಳಕೆ ಇಲ್ಲ. ವಿವೇಚನಾಯುಕ್ತವಾದ ವ್ಯವಹಾರಜ್ಞಾನ, ವಿವೇಕಯುತವಾದ ರಾಷ್ಟ್ರಾಭಿಮಾನ, ಶ್ರದ್ಧೆ, ಪ್ರಾಮಾಣಿಕತೆ, ಬೌದ್ಧಿಕಕುತೂಹಲ ಮತ್ತು ವಿದ್ವತ್ತುಗಳನ್ನು ಇವನ ಬರೆಹಗಳಲ್ಲಿ ಕಾಣಬಹುದು. ಇವನ ಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆಯಾದರೂ ಸರ್ಬಿಯದ ಸಾಹಿತ್ಯ ಮನೋಧರ್ಮದ ಮೇಲೆ ಈತ ಅಪಾರ ಪ್ರಭಾವವನ್ನು ಬೀರಿದ್ದಾನೆ. ಸರ್ಬಿಯದ ಆಧುನಿಕಸಾಹಿತ್ಯದ ಜನಕನಾದ ಸೊಲಾರಿಕೆ ಮತ್ತು ಇತರರು ಇವನ ಕಾರ್ಯವನ್ನು ಮುಂದುವರಿಸಿದ್ದಾರೆ.							          
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ